ಸುಸೂತ್ರವಾಗಿ ನಡೆಯಲಿ ಪರೀಕ್ಷೆ

ಮಕ್ಕಳ ಭವಿಷ್ಯ ಉಜ್ವಲವಾಗಲಿ
ಮಾರ್ಚ್‌ನಿಂದ ಜೂನ್‌ ತಿಂಗಳ ತನಕ ಮಕ್ಕಳಿಗೆ ಮತ್ತು ಪೋಷಕರಿಗೆ ಒತ್ತಡದ ದಿನಗಳು. ಮಕ್ಕಳಿಗೆ ಮಾರ್ಚ್‌ ಮತ್ತು ಏಪ್ರಿಲ್‌ ಪರೀಕ್ಷೆಯ ಒತ್ತಡವಾದರೆ ಅನಂತರ ಎರಡು ತಿಂಗಳು ಫ‌ಲಿತಾಂಶಕ್ಕೆ ಕಾಯುವ ಮತ್ತು ಹೊಸ ಕಾಲೇಜು ಹುಡುಕುವ ಒತ್ತಡ. ಅದರಲ್ಲೂ 10 ಮತ್ತು 12ನೇ ತರಗತಿಯಲ್ಲಿರುವ ಮಕ್ಕಳು ಒತ್ತಡದ ಭಾರಕ್ಕೆ ಕುಸಿದೇ ಹೋಗುತ್ತಾರೆ. ಒಂದೇ ಮನೆಯಲ್ಲಿ 10 ಮತ್ತು 12ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿದ್ದರಂತೂ ಆ ಮನೆ ಅಕ್ಷರಶಃ ಸಿಡಿಯಲು ತಯಾರಾಗಿರುವ ಬಾಂಬಿನಂತೆ, ಯಾವ ಕ್ಷಣ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮೊಬೈಲ್‌ ಬಂದ್‌, ಟಿವಿ ಬಂದ್‌, ಆಟ ಬಂದ್‌, ಬಂಧುಗಳ – ಸ್ನೇಹಿತರ ಭೇಟಿ ಬಂದ್‌ ಹೀಗೆ ಪರೀಕ್ಷಾ ಕಾಲದಲ್ಲಿ ಹಲವಾರು ನಿರ್ಬಂಧಗಳು. ಪರೀಕ್ಷೆಯೆಂಬ ವಾರ್ಷಿಕ ಶಿಕ್ಷಣ ವಿಧಿ ಈಗ ನಮ್ಮ ಜೀವನಶೈಲಿಯನ್ನೇ ಬದಲಾಯಿಸುವಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿದೆ. 10 ಮತ್ತು 12ನೇ ತರಗತಿ ಕಲಿಕೆಯ ನಿರ್ಣಾಯಕ ಘಟ್ಟ. ಹೀಗಾಗಿ ಈ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಸಾಲದು ಅತ್ಯುತ್ತಮ ಅಂಕ ಪಡೆದು ತೇರ್ಗಡೆ ಯಾಗಬೇಕು. ಎಲ್ಲ ಹೆತ್ತವರು ಮತ್ತು ಶಿಕ್ಷಕರು ಬಯಸುವುದು ತಮ್ಮ ಮಕ್ಕಳು ಶೇ.95ಕ್ಕಿಂತ ಮಿಗಿಲಾಗಿ ಅಂಕ ಗಳಿಸಬೇಕೆಂದು. ಈಗ ಪರೀಕ್ಷೆಗಳಿಗೆ ಎಷ್ಟು ಮಹತ್ವವಿದೆ ಎಂದರೆ ದೇಶದ ಪ್ರಧಾನಿಯೇ ಸ್ವತಃ ಮಕ್ಕಳಿಗೆ ಪರೀಕ್ಷೆಗೆ ಹೇಗೆ ತಯಾರಿ ಮಾಡಬೇಕೆಂದು ಸಲಹೆ ನೀಡುತ್ತಾರೆ. ಪರೀಕ್ಷೆ ಎದುರಿಸುವ ಮಕ್ಕಳಿಗಾಗಿಯೇ ಪ್ರಧಾನಿ ಮೋದಿ ಪುಸ್ತಕವನ್ನೂ ಬರೆದಿದ್ದಾರೆ. ಪರೀಕ್ಷೆ ಕಲಿಕೆಯ ಅವಿಭಾಜ್ಯ ಅಂಗ. ಆದರೆ ಹಿಂದೆ ಪರೀಕ್ಷೆಗೆ ಇಷ್ಟು ಮಹತ್ವ ಇರಲಿಲ್ಲ. ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರೆ ಅದೇ ದೊಡ್ಡ ಸಾಧನೆಯಾಗುತ್ತಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಥಮ ದರ್ಜೆ ಎನ್ನುವುದು ಏನೇನೂ ಅಲ್ಲ. ಎಲ್ಲ ಹೆತ್ತವರು ಬಯಸುವುದು ತಮ್ಮ ಮಕ್ಕಳು ಎಂಜಿನಿಯರ್‌ ಅಥವಾ ಡಾಕ್ಟರ್‌ ಆಗಬೇಕೆಂದು. ಇದಾಗಬೇಕಿದ್ದರೆ ವಿಜ್ಞಾನ ವಿಭಾಗಕ್ಕೆ ಸೇರ್ಪಡೆಯಾಗಬೇಕು. ಪ್ರತಿಷ್ಠಿತ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗಕ್ಕೆ ಸೀಟು ಸಿಗಬೇಕಾದರೆ ಶೇ 98ಕ್ಕಿಂತ ಹೆಚ್ಚಿನ ಅಂಕ ಗಳಿಸಿರಬೇಕಾಗುತ್ತದೆ. ಎಷೊRà ಕಾಲೇಜುಗಳಲ್ಲಿ ಶೇ. 98 ಕಟ್‌ಆಫ್ ಅಂಕ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೆತ್ತವರು ಮತ್ತು ಶಿಕ್ಷಕರು ಹೆಚ್ಚು ಅಂಕ ಗಳಿಸಲು ಮಕ್ಕಳ ಮೇಲೆ ಒತ್ತಡ ಹಾಕುವುದು ಸಹಜ. ಹೀಗಾಗಿಯೇ ಪರೀಕ್ಷಾ ಕಾಲದಲ್ಲಿ ಒತ್ತಡದಿಂದ ಬಳಲುವ ಮಕ್ಕಳ ಮತ್ತು ಪೋಷಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಳವಳಕಾರಿಯಾಗಿ ಹೆಚ್ಚುತ್ತಿದೆ. ಕೆಲವು ಮಕ್ಕಳು ಪರೀಕ್ಷೆ ಕಠಿಣವಾಗಿದ್ದರೆ ಫ‌ಲಿತಾಂಶ ಬರುವುದಕ್ಕಿಂತಲೂ ಮೊದಲೇ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಿರುವುದು ಕಳವಳಕಾರಿ. ಒತ್ತಡ ನಿವಾರಣೆಗಾಗಿಯೇ ಕೌನ್ಸಿಲಿಂಗ್‌ನ ಮೊರೆ ಹೋಗುವವರೂ ಇದ್ದಾರೆ. ಬಹುತೇಕ ಕೊನೇ ಕ್ಷಣದಲ್ಲಿ ಪರೀಕ್ಷಾ ತಯಾರಿ ಮಾಡುವ ಮಕ್ಕಳು ಹೆಚ್ಚಿನ ಒತ್ತಡಕ್ಕೆ ಗುರಿಯಾಗುತ್ತಾರೆ ಎನ್ನುತ್ತದೆ ಒಂದು ಅಧ್ಯಯನ. ಹಾಗೆಂದು ವರ್ಷಪೂರ್ತಿ ತಯಾರಿ ನಡೆಸಿದವರು ಒತ್ತಡದಿಂದ ಮುಕ್ತರಾಗಿರುತ್ತಾರೆ ಎಂದು ಭಾವಿಸಬೇಕಾಗಿಲ್ಲ. ಇದರ ಜತೆಗೆ ಈಗ ಪ್ರಶ್ನೆ ಪತ್ರಿಕೆ ಸೋರಿಕೆ ಎಂಬ ಪಿಡುಗು ಮಕ್ಕಳ ಜೀವ ತಿನ್ನುತ್ತದೆ. 2016ರಲ್ಲಿ ಒಂದೇ ಪಠ್ಯದ ಪ್ರಶ್ನೆ ಪತ್ರಿಕೆ ಎರಡೆರಡು ಸಲ ಸೋರಿಕೆಯಾಗಿ ಮಕ್ಕಳು ಸಂಕಷ್ಟಕ್ಕೀಡಾಗಿದ್ದು ಮಾತ್ರವಲ್ಲದೆ ಸರಕಾರವೂ ಮುಜುಗರ ಕ್ಕೀಡಾದ ಘಟನೆ ಇನ್ನೂ ಹಸಿರಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಮರು ಪರೀಕ್ಷೆ ನಡೆಸುವುದು ಅನಿವಾರ್ಯ. ಮಕ್ಕಳ ಪಾಲಿಗೆ ಮತ್ತೂಮ್ಮೆ ಪರೀಕ್ಷೆ ತಯಾರಿ ನಡೆಸಬೇಕಾದ ಸಂಕಟ. ಹಿಂದಿನ ವರ್ಷದ ಸೋರಿಕೆಯಿಂದ ಪಾಠ ಕಲಿತಿದ್ದ ಶಿಕ್ಷಣ ಇಲಾಖೆ ಕಳೆದ ವರ್ಷ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿದೆ. ಈ ವರ್ಷವೂ ಸಾಕಷ್ಟು ಬಿಗು ತಯಾರಿ ಮಾಡಿಕೊಂಡಿದೆ. ಆದರೂ ಫೇಸ್‌ಬುಕ್‌, ವಾಟ್ಸಪ್‌ ಮುಂತಾದ ಸೋಷಿಯಲ್‌ ಮೀಡಿಯಾ ಜಮಾನಾದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಕೆಲವೇ ಕ್ಷಣಗಳು ಸಾಕಾಗುತ್ತದೆ. ಈ ನಿಟ್ಟಿನಲ್ಲಿ ಗರಿಷ್ಠ ಎಚ್ಚರಿಕೆಯಿಂದ ಇರುವುದು ಅಗತ್ಯ. ಏನೇ ಆದರೂ ಪರೀಕ್ಷೆಗಳ ಸುಸೂತ್ರವಾಗಿ ನಡೆದು ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದಷ್ಟೇ ಈ ಸಂದರ್ಭದಲ್ಲಿ ಹಾರೈಸಬಹುದು.

Leave a Reply

अन्य समाचार

मुख्य समाचार

उपर